ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ – ಶ್ರೀಮತಿ ಯಾದವ ವನಮಾಲಾ ಆನಂದರಾವ್
1 min readಹಾವೇರಿ : ಮಾನವ ಹಕ್ಕುಗಳು ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರುತ್ತವೆ. ನಮ್ಮ ಹಕ್ಕುಗಳ ರಕ್ಷಣೆ ಜೊತೆಗೆ ಬೇರೆಯವರ ಹಕ್ಕುಗಳಿಗೆ ದಕ್ಕೆಬಾರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಗುರುತರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಯಾದವ ವನಮಾಲಾ ಆನಂದರಾವ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡಿದರು.
ಮನುಷ್ಯನ ಘನತೆ, ಭದ್ರತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಕುಂದುಬಾರದಂತೆ ರಕ್ಷಿಸುವುದೇ ಮೂಲಭೂತ ಹಕ್ಕುಗಳ ಉದ್ದೇಶವಾಗಿದೆ. ಮಾನವ ಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿವೆ. ಎರಡು ಮಹಾಯುದ್ಧಗಳಿಂದ ಉಂಟಾದ ಸಾವು-ನೋವುಗಳು ಮುಂದೆಂದೂ ಮರುಕಳಿಸಬಾರದು ಎಂಬ ಹಿನ್ನೆಲೆಯಲ್ಲಿ 1948 ರಲ್ಲಿ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಘೋಷಿಸಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಮಾತನಾಡಿ, ಒಬ್ಬ ಮನುಷ್ಯನ ಸಂಪೂರ್ಣ ಬೆಳವಣಿಗೆಗೆ ಮೂಲಭೂತ ಹಕ್ಕುಗಳು ಅಗತ್ಯವಾಗಿವೆ. ಒಂದೊಂದು ಹಕ್ಕಿಗಾಗಿ ಎರಡು ಸಾವಿರ ನಿರಂತರ ಹೋರಾಟದಿಂದ ಮಾನವ ಹಕ್ಕುಗಳ ಪರಿಕಲ್ಪನೆ ಮೂಡಿಬಂದಿದೆ ಹಾಗೂ ಮೂಲಭೂತ ಹಕ್ಕುಗಳ ಸ್ಥಾಪನೆ ಮಾಡಲಾಗಿದೆ. ಭಾರತವು ಸೇರಿದಂತೆ ಪ್ರಜಾಪ್ರಭುತ್ವ ಹಿನ್ನೆಲೆಯಿಂದ ಬಂದ 48 ರಾಷ್ಟ್ರಗಳು 1948 ರಲ್ಲಿ ಯುನೈಟೆಡ್‍ನಲ್ಲಿ ವೋಟ್ ಮಾಡುವ ಮೂಲಕ ಮಾನವ ಹಕ್ಕುಗಳನ್ನು ಅಂಗೀಕರಿಸಲಾಯಿತು. ಭಾರತದ ಸಂವಿಧಾನದಲ್ಲಿಯೂ ಸಹ ಮಾನವ ಹಕ್ಕುಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು.
ಭಾರತದಲ್ಲಿ 1950ರಲ್ಲಿ ಸಂವಿಧಾನ ರಚಿಸಿ ಮೂಲಭೂತ ಹಕ್ಕುಗಳನ್ನು ನೀಡಲಾಯಿತು. ಈ ಮೊದಲು ಎಲ್ಲರಿಗೂ ಮತದಾನದ ಹಕ್ಕು ಇರಲಿಲ್ಲ. 1950ರ ನಂತರ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಅಗತ್ಯ, ಜೊತೆಗೆ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ. ಈ ಕುರಿತಂತೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕೆ.ಎಲ್.ಅಂಗರಗಟ್ಟಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪುಟ್ಟರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಡಿವೈಎಸ್.ಪಿ. ಶಂಕರ ಮಾರಿಹಾಳ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಕಾಶ ಸುಂಕದ, ಜಿಲ್ಲಾ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಐ.ಎಸ್.ನಂದಿ ಉಪಸ್ಥಿತರಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.