ಜಿಲ್ಲಾ ಮಹಿಳಾ ಆಸ್ಪತ್ರೆ: ರೋಗಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ
1 min readಹಾವೇರಿ : ಹಾವೇರಿ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡದಿಂದ ತೊಂದರೆ ಉಂಟಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗಾಗಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಪಿಸಿ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರು ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 21 ಸೆಪ್ಟೆಂಬರ್ 2021 ಮಾಹೆಯಲ್ಲಿ ಅಗ್ನಿ ಅವಘಡ ಸಂಭವಿಸಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಈ ಕುರಿತಂತೆ ತಕ್ಷಣ ಕ್ರಮವಹಿಸಿ ಮೇನ್ ಇಲೆಕ್ಟ್ರಿಕಲ್ ಪ್ಯಾನಲ್ ಬೋರ್ಡ್ ವೈರಿಂಗ್ ಕೆಲಸವನ್ನು ನಿರ್ಮಿತಿ ಕೇಂದ್ರ ಏಜೆನ್ಸಿಗೆ ವಹಿಸಲಾಗಿದ್ದು, ಅಂದಾಜು 29.7 ಲಕ್ಷ ರೂ. ವೆಚ್ಚದಲ್ಲಿ ಡಿಸೆಂಬರ್ ಐದರಿಂದ ದುರಸ್ತಿ ಕಾರ್ಯ ಆರಂಭಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ ಮಹಿಳೆಯರ ಚಿಕಿತ್ಸೆಗೆ ತೊಂದರೆಯಾಗದಂತೆ ಈ ಕಟ್ಟಡದಲ್ಲಿ ಸಾಮಾನ್ಯ ಹೆರಿಗೆಗಳನ್ನು ನಡೆಸಲಾಗುತ್ತಿದ್ದು, ಸಿಜೇರಿಯನ್ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲೇ ಮಾಡಲಾಗುತ್ತಿದೆ. ಅಗ್ನಿ ಅವಘಡ ಸಂಭವಿಸಿದ ದಿನದಿಂದ ಇಲ್ಲಿಯವರೆಗೆ ಸುಮಾರು ಮೂರು ತಿಂಗಳಿನಿಂದ 769 ಸಾಮಾನ್ಯ ಹೆರಿಗೆ, 634 ಸಿಜೇರಿಯನ್ ಹೆರಿಗೆಯ ಜೊತೆಗೆ 187 ಸಂತಾನಹರಣ ಶಸ್ತ್ರಚಿಕಿತ್ಸೆ, ಮತ್ತು 69 ಲ್ಯಾಪ್ರೇಸ್ಕೋಪಿಕ್ ಟೂಬೆಕ್ಟಮಿ (ಎಲ್.ಟಿ.ಓ)ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಲಾಗಿರುತ್ತದೆ.
ಡಿಸೆಂಬರ್ ಮಾಹೆಯ ಏಳು ದಿನದಲ್ಲಿ 62 ಸಾಮಾನ್ಯ ಹಾಗೂ 48 ಸಿಜೇರಿಯನ್ ಹೆರಿಗೆಗಳನ್ನು ಮಾಡಿಸಲಾಗಿದೆ. ಪ್ರಸ್ತುತವಾಗಿ ಸಾಮಾನ್ಯ ಹೆರಿಗೆಗಳು ಸದರಿ ಕಟ್ಟಡದಲ್ಲಿಯೇ ನಡೆಯುತ್ತಿವೆ. ಸಿಜೇರಿಯನ್ ಹೆರಿಗೆಯನ್ನು ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ 30 ಹಾಸಿಗೆಯ ವಾರ್ಡ್‍ನ್ನು ಸಿದ್ಧಪಡಿಸಿಕೊಂಡು, ಹಳೆಯ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಿ ಸಿಜೇರಿಯನ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಒಂದೂ ಕೋವಿಡ್-19 ಸೋಂಕಿತ ಪ್ರಕರಣವು ದಾಖಲಾಗದ ಕಾರಣ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ನಡೆದಿದ್ದರಿಮದ ಪರ್ಯಾಯ ವ್ಯವಸ್ಥೆಯಾಗಿ ಈ ವಿಭಾಗಗಳನ್ನು ಸ್ಯಾನಿಟೈಸ್ ಮಾಡಿ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲಾಗಿದೆ. ಆದಷ್ಟು ಬೇಗ ಹೊಸ ಇಲೆಕ್ಟ್ರಿಕಲ್ ಪ್ಯಾನಲ್ ಬೋರ್ಡ್‍ನ್ನು ಅಳವಡಿಸಿ ಎಲ್ಲಾ ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಐದರಿಂದ ಏಳು ದಿನಗಳಲ್ಲಿ ಮುಗಿಸಿ ಈ ಕಟ್ಟಡದಲ್ಲೇ ಸಿಜೇರಿಯನ್ ಹೆರಿಗೆಗಳನ್ನು ಮಾಡಿಸಲು ಕ್ರಮವಹಿಸಲಾಗುವುದು. ಅಗ್ನಿ ಅವಘಡದಿಂದ ಜೀವಹಾನಿಯಾಗಲಿ ಅಥವಾ ಯಾವೊಬ್ಬ ರೋಗಿಗೂ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಉತ್ತಮವಾದ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.