Tue. Feb 1st, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪ್ರತಿಷ್ಠಿತ ಕಾಲೇಜು ಆಡಳಿತ ಮಂಡಳಿಯ ಅವಾಂತರ ಕಾಲೇಜಿನ ಮುಂದೆ ದ್ವಿಚಕ್ರ ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್ :

1 min read

ನಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಿ ಸರಿಯಾದ ವಿದ್ಯಾಭ್ಯಾಸ ಮಾಡಲಿ ಎಂದು ಪಾಲಕರು ಸಾಲ-ಸೂಲ ಮಾಡಿ, ಬೈಕ್ ಕೊಡಿಸಿರುತ್ತಾರೆ. ನಾವು ತರುವ ಬೈಕ್‍ಗಳನ್ನು ರಸ್ತೆಯಲ್ಲಿ ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಬೈಕ್ ನಿಲ್ಲಿಸುವಾಗ, ತೆಗೆಯುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು..? ಎನ್ನುವಂತಾಗಿದೆ. ಜೊತೆಗೆ ವಾಹನಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದಂತಾಗಿರುವುದು ನಮ್ಮನ್ನು ಕಾಡುತ್ತಿದೆ. ಈ ವಿಷಯವನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವುದಕ್ಕೆ ಮುಂದಾದರೆ ಎಲ್ಲಿ ನಮ್ಮನ್ನು ಕಾಲೇಜ್‍ನಿಂದ ಹೊರ ಹಾಕುತ್ತಾರೋ ಎಂಬ ಅಂಜಿಕೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು ಪಾಂಡವ ಪತ್ರಿಕೆಗೆ ಮನವಿ ಮಾಡಿದ್ದಾರೆ.


ಕಾಲೇಜ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾಲೇಜ್ ಪ್ರಿನ್ಸಿಪಲ್, ನಗರಸಭೆ ಆಯುಕ್ತರೊಂದಿಗೆ ಸಭೆಯನ್ನು ಮಾಡಲಾಗಿದೆ. ಕಾಲೇಜ್‍ನ ಕಂಪೌಂಡ್‍ಗೆ ಹೊಂದಿಕೊಂಡು ಚರಂಡಿಯನ್ನು ನಿರ್ಮಿಸಿಕೊಳ್ಳಲು ಈಗಾಗಲೆ ತಿಳಿಸಲಾಗಿದೆ. ಕಾಲೇಜ್ ವಿದ್ಯಾರ್ಥಿಗಳಿಗೆ ಕಾನೂನು ರೀತಿ ವಾಹನ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿಕೊಡಬೇಕು. ದ್ವಿಚಕ್ರ ವಾಹನಗಳ ನಿಲುಗಡೆಯಿಂದ ಪ್ರಸಕ್ತ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
– ನಾಗರಾಜ. ಎಚ್.

ಪಿಡಬ್ಲೂಡಿ ಸಹಾಯಕ ಅಭಿಯಂತರರು ಹಾವೇರಿ


ಪ್ರಶಾಂತ ಮರೆಮ್ಮನವರ
ಹಾವೇರಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ಓಡಾಡುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಉದ್ಧೇಶದಿಂದ ರಸ್ತೆಯ ಎರಡು ಬದಿಯಲ್ಲಿ ಸುಂದರ ಪುಟ್‍ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಅದೇ, ಪುಟ್‍ಪಾಟ್‍ನ್ನು ಇಂದು ದ್ವಿಚಕ್ರ ವಾಹನಗಳನ್ನು ಅವೈಜ್ಞಾನಿಕವಾಗಿ ನಿಲ್ಲಿಸುವುದರ ಮೂಲಕ ನಿತ್ಯ ಆ ಜಾಗದಲ್ಲಿ ಓಡಾಡುವ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಿದ್ದಾರೆ.
ಹೌದು, ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್‍ನ ಆಡಳಿತ ಮಂಡಳಿ ಅವಾಂತರದಿಂದ ನೂರಾರು ವಿದ್ಯಾರ್ಥಿಗಳು ತಮ್ಮ ದ್ವಿಚಕ್ರ ವಾಹನಗಳನ್ನು ಪುಟ್‍ಪಾತ್ ಮೇಲೆ ನಿಲ್ಲಿಸುವಂತಾಗಿದೆ. ಆಡಳಿತ ಮಂಡಳಿಗೆ ಅದೇನು ವಿದ್ಯಾರ್ಥಿಗಳ ಮೇಲೆ ದ್ವೇಷವೋ ಏನೋ, ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳು ತರುವ ಬೈಕ್‍ಗಳನ್ನು ನಿಲುಗಡೆಗೆ ವ್ಯವಸ್ಥೆ ಕಲ್ಪಿಸದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜ್ ಮುಂಭಾಗದಲ್ಲಿರುವ ಹೆದ್ದಾರಿ ಪಕ್ಕದಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಂತಾಗಿದೆ. ಕಾಲೇಜಿನ ಆವರಣದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದ್ದರೂ, ಆ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಸೂಚಿಸಿಲ್ಲ. ಈ ಕಾಲೇಜ್ ಮುಂಭಾಗದಲ್ಲಿರುವ ಕಂಪೌಂಡಿಗೆ ಹೊಂದಿಕೊಂಡು ಹೆದ್ದಾ ರಿಗೆ ಹಚ್ಚಿಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಈ ರಸ್ತೆಯ ಮೇಲೆ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಈ ಕಾಲೇಜ್‍ಗೆ ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಕಾಲೇಜ್‍ಗೆ ಬರುವ ವಿದ್ಯಾರ್ಥಿಗಳಲ್ಲಿ 500-600 ವಿದ್ಯಾರ್ಥಿ, ವಿದ್ಯಾರ್ಥಿನಿಯರು ದ್ವಿಚಕ್ರ ವಾಹನಗಳನ್ನು ತರುತ್ತಾರೆ. ಆದರೆ ಪ್ರಸಕ್ತ ಈ ವಿದ್ಯಾರ್ಥಿಗಳ್ಯಾರೂ ಕಾಲೇಜ್ ಆವರಣದ ಒಳಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಿಲ್ಲ. ಅವರೆಲ್ಲ ಕಾಲೇಜ್ ಕಂಪೌಂಡ್‍ನಿಂದ ಹೊರಗಡೆಯೇ ನಿಲ್ಲಿಸುತ್ತಿದ್ದಾರೆ.


ಇದರಿಂದ ರಸ್ತೆಯಲ್ಲಿ ಸಾಗುವ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತದೆ. ಜೊತೆಗೆ ಪಾದಚಾರಿಗಳು ವಿದ್ಯಾರ್ಥಿಗಳಿಂದ ಕಿರುಕುಳ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು ಯದ್ವಾ-ತದ್ವಾ ಬೈಕ್ ಪಾರ್ಕ್ ಮಾಡುತ್ತಿರುÀವುದಕ್ಕೆ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಹಾಕಿರುವ ಪುಟ್ ಪಾತ್ ಫೆವರ್‍ಗಳು ಹಾಳಾಗುತ್ತಿವೆ. ಕಾಲೇಜ್ ಮುಂಭಾಗದಲ್ಲಿರುವ ರಸ್ತೆಯಲ್ಲಿ ತಿರುವು ಇದೆ. ಬೇಕಾ-ಬಿಟ್ಟಿ ಪಾರ್ಕಿಂಗ್ ಮಾಡಿರುವುದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ, ಸಾರ್ವಜನಿಕರಿಗೆ ಹಾಗೂ ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಏನಾದರು ಹೆಚ್ಚು-ಕಡಿಮೆಯಾದರೆ ಹೊಣೆಯಾರು..? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಕಾಲೇಜ್ ಆಡಳಿತ ಮಂಡಳಿ ತಮ್ಮ ಕಾಲೇಜ್‍ಗೆ ಬರುವ ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಬೇಕಾದದ್ದು ಆಡಳಿತ ಮಂಡಳಿಯ ಕರ್ತವ್ಯ. ಹೀಗಿದ್ದರೂ ಕಾಲೇಜ್ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಬೈಕ್ ಆಚೆ ನಿಲ್ಲಿಸುವಂತೆ ಆದೇಶ ನೀಡಿರುವುದು ಖಂಡನೀಯ.

  •  
  •  
  •  
  •  
  •  
  •  

3 thoughts on “ಪ್ರತಿಷ್ಠಿತ ಕಾಲೇಜು ಆಡಳಿತ ಮಂಡಳಿಯ ಅವಾಂತರ ಕಾಲೇಜಿನ ಮುಂದೆ ದ್ವಿಚಕ್ರ ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್ :

Leave a Reply

Your email address will not be published.

Copyright © All rights reserved. | Developed by EXPOLOG TECHNOLOGIES
error: Content is protected !!