ಗ್ರೇಡ್ 2 ಹುದ್ದೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ : ಕೆಎಟಿ
1 min read
ಬೆಂಗಳೂರು : ಬಡ್ತಿಗಾಗಿ ನೌಕರರು ಕನಸು ಕಾಣುತ್ತಾರೆ. ಅದಕ್ಕಾಗಿ ಓದುತ್ತಾರೆ. ಹೆಚ್ಚುವರಿ ಶಿಕ್ಷಣಗಳನ್ನು ಪಡೆಯುತ್ತಾರೆ. ಉನ್ನತ ಹುದ್ದೆಯ ಕನಸು ಈಡೇರಿಸಿಕೊಳ್ಳಲು ಹೋರಾಟ ಮಾಡುತ್ತಾರೆ. ಅಂತೆಯೇ, ಸರ್ಕಾರದ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಹತೆ ಮೇರೆಗೆ ಪ್ರೌಢ ಶಾಲಾ ಬೋಧಕರ ಹುದ್ದೆಗಳಿಗೆ ಬಡ್ತಿ ಪಡೆದುಕೊಂಡವರಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಬಡ್ತಿ ರದ್ದು ಮಾಡಿ ಆದೇಶಿಸಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಪ್ರೌಢ ಶಾಲಾ ಬೋಧಕರ ಹುದ್ದೆಗಳಿಗೆ ಬಡ್ತಿ ನೀಡಿದ್ದನ್ನು ಆರನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳಿಗೆ ಪಾಠ ಮಾಡುವ ಒಂದು ನೂರಕ್ಕೂ ಹೆಚ್ಚು ಶಿಕ್ಷಕರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಸಲ್ಲಿಸಿದ್ದ ದೂರು ಆಧರಿಸಿ ಸದರಿ ಆದೇಶವನ್ನು ನೀಡಲಾಗಿದೆ.
ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್ 2 ಹುದ್ದೆಗೆ ಆರನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಅರ್ಹರು. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವವರಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಪ್ರೌಢ ಶಾಲಾ ಬೋಧಕರ ಹುದ್ದೆಗಳಿಗೆ ಬಡ್ತಿ ನೀಡಿದ್ದಲ್ಲಿ ಬಡ್ತಿಯನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಲಾಗಿದೆ. ಈ ಆದೇಶದಿಂದ ಸುಮಾರು ಎಂಟು ಸಾವಿರ ಶಿಕ್ಷಕರಿಗೆ ಬಡ್ತಿ ರದ್ದಾಗುವುದೆಂದು ಹೇಳಲಾಗಿದೆ. ಸುಮಾರು ಹದಿಮೂರು ಸಾವಿರದಷ್ಟು ಇರುವ ಆರನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಈ ಆದೇಶದಿಂದ ಉಪಯೋಗವಾಗಲಿದೆ ಎಂದು ದೂರುದಾರರ ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿ ಮದನಗೌಡ ಎನ್ ಪಾಟೀಲ್ ಹೇಳಿದ್ದಾರೆ.
ಸೇವಾ ಹಿರಿತನವನ್ನು ಪರಿಗಣಿಸಬೇಕು. ವೃಂದ ಮತ್ತು ನೇಮಖಾತಿ ನಿಯಮಾವಳಿಗಳನ್ನು ಆಧರಿಸಿ ಆರನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಬಡ್ತಿಗೆ ಅರ್ಹತೆ ಪಡೆಯುತ್ತಾರೆ. ಈಗಾಗಲೇ ಪದೋನ್ನತಿ ಪಡೆದವರ ಹಿಂದಿನ ಹುದ್ದೆ ಪ್ರೌಢ ಶಾಲಾ ಶಿಕ್ಷಕ ಗ್ರೇಡ್ 2 ಹುದ್ದೆಗೆ ಅರ್ಹತೆಯ ಸೇವಾ ಹಿರಿತನ ಪಟ್ಟಿಯಲ್ಲಿ ಬರುವುದಿಲ್ಲ. ಒಂದರಿಂದ ಐದರವರೆಗಿನ ಮತ್ತು ಆರರಿಂದ ಎಂಟರವರೆಗಿನ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಸೇವಾ ಹಿರಿತನವನ್ನು ಪ್ರತ್ಯೇಕವಾಗಿಯೇ ಪತಿ ಮಾಡಬೇಕು. ಎಂಬುದು ಆದೇಶದ ಮುಖ್ಯಾಂಶವಾಗಿದೆ.