Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಣೇಬೆನ್ನೂರಿನ ಮೂತ್ರ ಹೊಯ್ಯೋ ರೂಮುಗಳಿಗೆ ಮುಕ್ತಿ ಎಂದು..?

ಪಾಂಡವ ನ್ಯೂಸ್, ರಾಣೇಬೆನ್ನೂರು: ಕೇಂದ್ರ ಸರಕಾರದ ನೇತೃತ್ವ ವಹಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಪ್ರತಿ ಭಾಷಣದಲ್ಲಿಯೂ ‘ಸ್ವಚ್ಚ ಭಾರತ, ಸ್ವಚ್ಚ ಭಾರತ’ ಎಂದು ಬೊಬ್ಬೆ ಹೊಡೆಯುತ್ತಲೇ ಇರುತ್ತಾರೆ. ಜೊತೆ ಜೊತೆಗೆ ಸ್ವಚ್ಚತೆಗೋಸ್ಕರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ರಾಣೇಬೆನ್ನೂರು ನಗರಕ್ಕೆ ಮಾತ್ರ ಅದು ಅನ್ವಯಿಸುತ್ತಿಲ್ಲ. ಏಕೆಂದರೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಕಾಷ್ಠ ಮೌನಕ್ಕೆ ಶರಣಾಗಿದ್ದಾರೆ.
ನಗರದೆಲ್ಲೆಡೆ ಇರುವ ಯಾವುದೇ ಸಾರ್ವಜನಿಕ ಶೌಚಾಲಯಕ್ಕೆ ಕಾಲಿಟ್ಟರೆ ಸಾಕು, ಗಬ್ಬೆದ್ದು ನಾರುತ್ತಿವೆ. ಅವುಗಳ ಹತ್ತಿರ ಸುಳಿಯುವುದೇ ದುಸ್ತರವಾಗಿದೆ. ಒಂದು ಶೌಚಾಲಯವಿದೆಯೆಂದರೆ ಅದರ ಸುತ್ತಮುತ್ತಲಿರುವ ಪ್ರದೇಶವೆಲ್ಲ ಕೊಳಕುಮಯವಾಗಿದೆ. ಇನ್ನು ಅಂತಹ ಶೌಚಾಲಯಗಳ ಸುತ್ತಮುತ್ತ ವಾಸಿಸುವ ನಿವಾಸಿಗಳ ಗತಿಯೇನು? ದಿನದ 24 ಗಂಟೆಗಳ ಕಾಲ ಅವುಗಳು ಬೀರುವ ದುರ್ನಾತವನ್ನು ಸೇವಿಸುತ್ತಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಸರಿಪಡಿಸಲು ವ್ಯವಸ್ಥೆ ಮಾಡಬೇಕಾದ ನಗರಸಭೆ ಪಾಖಂಡಿ ಅಧಿಕಾರಿಗಳಂತೂ ಅತ್ತ ತಲೆ ಹಾಕಿಯೂ ಮಲಗುತ್ತಿಲ್ಲ.
ಉದಾಹರಿಸಬೇಕೆಂದರೆ ನಗರದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯ, ಚಕಿಮಿಕಿ ದೇವಸ್ಥಾನದ ಎದುರಿಗಿರುವ ಶೌಚಾಲಯ, ಗುತ್ತಲ ಸ್ಟ್ಯಾಂಡ್ ಹತ್ತಿರ, ಮೆಡ್ಲೇರಿ ರಸ್ತೆಯ ಓವರ್ ಹೆಡ್ ಟ್ಯಾಂಕ್ ಬಳಿ ಇರುವ ಶೌಚಾಲಯ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳ ಹಣೆ ಬರಹವೂ ಇದೇ ಆಗಿದೆ. ಅವೆಲ್ಲವೂ ಕೂಡ ಜನನಿಬಿಡ ಪ್ರದೇಶದಲ್ಲಿವೆ. ನಿತ್ಯ ದುರ್ನಾತ ಬೀರುವುದರಿಂದ ಜನರ ಆರೋಗ್ಯದ ಗತಿ ಏನಾಗಬಾರದು? ಇದೇನಾ ಸ್ವಚ್ಚತೆ? ಇನ್ನು ರೈಲ್ವೇ ನಿಲ್ದಾಣದಿಂದ ಹಿಡಿದು ಬಸ್ಟ್ಯಾಂಡ್ ವೃತ್ತದವರೆಗೆ ಮುಖ್ಯ ರಸ್ತೆಯುದ್ದಕ್ಕೂ ಯಾವುದೇ ಒಂದು ಶೌಚಾಲಯವಿಲ್ಲ. ತಾಲೂಕ ಪಂಚಾಯಿತಿ ಎದುರುಗಡೆ ಒಂದು ಶೌಚಾಲಯವಿದ್ದಿತ್ತು. ಅದನ್ನೂ ಮುಚ್ಚಲಾಗಿದೆ. ಈ ರಸ್ತೆಯುದ್ದಕ್ಕೂ ದಿನನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಇಲ್ಲೊಂದು ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಇಲ್ಲವೇ? ಉತ್ತರಿಸುವವರಾರು? ಡಯಾಬಿಟೀಸ್, ಸಕ್ಕರೆ ಖಾಯಿಲೆ ಇರುವಂತಹ ಸಾರ್ವಜನಿಕರು ಮೂತ್ರಕ್ಕೆಂದು ಹೋಗುವುದಾದರೂ ಎಲ್ಲಿಗೆ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
‘ಸರಕಾದ ಕೆಲಸ ದೇವರ ಕೆಲಸ’ ಎನ್ನುವ ಗಾದೆಯಂತೂ ಅಧಿಕಾರಿಗಳ ಪ್ರಕಾರ ಪುಸ್ತಕದ ಬದನೆಕಾಯಿಯಾಗಿದೆ. ಇವರ ಹೆಸರುಗಳ ಮುಂದೆ ದೊಡ್ಡ ದೊಡ್ಡ ‘ಪೌರಾಯುಕ್ತ, ಪರಿಸರ ಅಭಿಯಂತರ, ಆರೋಗ್ಯಾಧಿಕಾರಿ’ ಎನ್ನುವ ಡಿಸಿಗ್ನೇಶನ್ ಬೇರೆ. ಅಂತಹ ಡಿಸಿಗ್ನೇಶನ್ ಇಟ್ಟುಕೊಂಡಿರುವ ಇವರು ಅರ್ಹರಿರುವೆವೇ ಎಂಬುದನ್ನು ಅವರವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಗರಸಭೆ ಈ ಅಧಿಕಾರಿಗಳು ಸರಕಾರದಿಂದ ಬರುವ ಸಂಭಳ ತೆಗೆದುಕೊಳ್ಳುತ್ತಾ ಅಧಿಕಾರದ ಹಾಯಿದೋಣಿಯಲ್ಲಿ ಮೈ ಮರೆತು ಮಲಗಿದ್ದಾರೆ. ಎಚ್ಚರವಾದಾಗ ಪುಡಾರಿ ರಾಜಕಾರಣಿಗಳಿಗೆ ಶುದ್ದಾಂಗ ಚಮಚಾಗಿರಿ ಮಾಡುವುದೇ ಇವರ ಕೆಲಸವಾಗಿದೆ. ರಾಣೇಬೆನ್ನೂರು ನಗರ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಹೀಗೆ ಬೆಳೆಯುತ್ತಿರುವ ನಗರದ ಸ್ವಚ್ಚತೆಯ ಕಡೆಗೆ ಗಮನ ಹರಿಸಬೇಕಾದ್ದು ನಗರಸಭೆ ಅಧಿಕಾರಿಗಳ ಕರ್ತವ್ಯ.
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಆರ್.ಶಂಕರ್ ಮತ್ತು ಶಾಸಕ ಅರುಣಕುಮಾರ ಪೂಜಾರ ಅವರು ತಮ್ಮ ಬಹಿರಂಗ ಭಾಷಣಗಳಲ್ಲಿ ರಾಣೇಬೆನ್ನೂರು ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುತ್ತೇವೆ ಎಂದು ಹೇಳುತ್ತಲೇ ಹೊರಟಿದ್ದಾರೆ. ಆದರೆ, ಅವರ ಕಣ್ಣಿಗೆ ಗಬ್ಬೆದ್ದು ನಾರುತ್ತಿರುವ ಸಾರ್ವಜನಿಕ ಶೌಚಾಲಯಗಳು ಕಾಣಿಸುತ್ತಿಲ್ಲವೇ? ಕಂಡರೂ ಕೂಡ ಬಕೆಟ್ ಹಿಡಿಯುವ ಅಧಿಕಾರಿಗಳನ್ನು ಬೆಂಡೆತ್ತುವುದಿಲ್ಲವೇಕೆ? ಇವರು ಅಧಿಕಾರದ ಚುಕ್ಕಾಣಿ ಹಿಡಿದದ್ದೇ ಯಾರದೋ ಗೋರಿಯ ಮೇಲಿನ ಹೂವಾಗಿ ಅರಳಿದ್ದರಿಂದ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಕೊರೊನಾದಂತಹ ಮಹಾಮಾರಿ ರೋಗ ತನ್ನ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ವಚ್ಚತೆ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ಇದರಿಂದ ನಿತ್ಯ ಸಾರ್ವಜನಿಕರು ಪಡುತ್ತಿರುವ ಯಾತನೆಯನ್ನು ತಪ್ಪಿಸಿದಂತಾಗುತ್ತದೆ. ಕಾದು ನೋಡಬೇಕು. ನಗರಸಭೆ ಅಧಿಕಾರಿಗಳ ಕಾರ್ಯ ದಕ್ಷತೆ ಎಷ್ಟಿದೆಯೆಂದು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!