Tue. Nov 23rd, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಬಡವರಿಗೆ ಉಚಿತವಾಗಿ ದಿನಸಿ ಕಿಟ್ ವಿತರಿಸಿದ ವಿಧಾನ ಪರಿಷತ್ ಶಾಸಕ, ಸಚಿವ ಆರ್ ಶಂಕರ್

1 min read

ಪಾಂಡವ ನ್ಯೂಸ್, ರಾಣೇಬೆನ್ನೂರು: ಕೊರೊನಾ (ಕೋವಿಡ್-19) ವೈರಸ್ ಪ್ರತಿದಿನ ತನ್ನ ರೌದ್ರ ನರ್ತನ ತೋರುತ್ತಿದ್ದು, ಕರ್ನಾಟಕಕ್ಕೆ ಜೂ.7 ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಬಡವರು ಹಸಿವಿನಿಂದ ಬಳಲಬಾರದೆಂಬ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕ ಹಾಗೂ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಸಚಿವ ಆರ್‍ಶಂಕರ್ ಭಾನುವಾರ ಸಂಜೆ ಇಲ್ಲಿನ ಗಣೇಶ ನಗರದಲ್ಲಿ ಬಡವರ ಪ್ರತಿ ಮನೆ – ಮನೆಗೆ ತೆರಳಿ ಅಕ್ಕಿ, ಸಕ್ಕರೆ, ಚಹಾಪುಡಿ ದಿನಸಿಗಳ ಕಿಟ್‍ಅನ್ನು ಉಚಿತವಾಗಿ ವಿತರಿಸಿದರು.
5 ಕೆ.ಜಿ. ಅಕ್ಕಿ, 1 ಕಿಲೋ ಸಕ್ಕರೆ ಹಾಗೂ 250 ಗ್ರಾಂ ಚಹಾಪುಡಿ ಹೊಂದಿದ ದಿನಸಿಯ ಕಿಟ್‍ಅನ್ನು ಮನೆ – ಮನೆಗಳಿಗೆ ಸ್ವತಃ ಆರ್. ಶಂಕರ್ ಅವರೇ ತೆರಳಿ ವಿತರಿಸಿದರು. ಕೊರೊನಾ 2ನೇ ಅಲೆ ತನ್ನ ದಾಪುಗಾಲನ್ನು ಇಮ್ಮಡಿ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಮೇ ತಿಂಗಳ ಮೊದಲನೇ ವಾರದಿಂದಲೇ ಕರ್ನಾಟಕಕ್ಕೆ ಲಾಕ್‍ಡೌನ್ ಘೋಷಿಸಿದರು. ಯಾವಾಗ ಲಾಕ್‍ಡೌನ್ ಘೋಷಣೆಯಾಯಿತೋ; ಆರ್.ಶಂಕರ್ ಅವರು ಕೂಡಲೇ ತಮ್ಮ ಕ್ಷೇತ್ರದ ಬಡವರ ಪಾಲಿನ ಆಶಾಕಿರಣವಾಗಲು ಅನುವಾದರು.

ಲಾಕ್‍ಡೌನ್ ಮಾಡುವುದರಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಕೂರಬೇಕಾದ ಸಂದಿಗ್ದ ಪರಿಸ್ಥಿತಿ ಎದುರಾಯಿತು. ಆಗ ಯಾವ ಬಡವರೂ ಸಹ ಹಸಿವಿನಿಂದ ಬಳಲಬಾರದೆಂಬ ಉದ್ದೇಶವಿಟ್ಟುಕೊಂಡ ಆರ್.ಶಂಕರ್, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿ – ಹಳ್ಳಿಗಳಿಗೆ ತೆರಳಿ ದಿನಸಿ ಕಿಟ್ ಕೊಡುತ್ತ ಬಡವರ ಹಸಿವು ನೀಗಿಸಿದ ಅನ್ನದಾತರೆಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಮೂಲಕ ತಮ್ಮ ಮಾನವೀಯ ಮೌಲ್ಯ ಮೆರೆಯುತ್ತಿದ್ದಾರೆ.
ದಿನಸಿಗಳನ್ನು ಹೊಂದಿದ ಕಿಟ್ ಮೇಲೆ “ಶ್ರೀ ಆರ್.ಶಂಕರ್ ಅಭಿಮಾನಿಗಳ ಬಳಗ ರಾಣೇಬೆನ್ನೂರು’ ಎಂದಿದ್ದು, ಸಾಮಾಜಿಕ ಕಳಕಳಿ ಮೆರೆಯುವ ಕೆಲವು ಸಾಲುಗಳು ಇಂತಿವೆ. “ಮಾಸ್ಕ್‍ನ್ನು ಖಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಸ್ಯಾನಿಟೈಜರನ್ನು ಉಪಯೋಗಿಸಿ, ಮನೆಯಲ್ಲಿಯೇ ಇರಿ ಕೊರೊನಾ ತಡೆಗಟ್ಟಿ, ಸರ್ಕಾರದ ಆದೇಶವನ್ನು ಪಾಲಿಸಿರಿ” ಎಂಬ ಸಾಲುಗಳನ್ನು ಬರೆಯಲಾಗಿದೆ.

ದಾನ ಮಾಡಲು ದಯಾಳು ಗುಣ ಬೇಕು..! ‘ಸಾವುಕಾರ ಅನ್ನಿಸ್ಕೆಂಡರ್ ಎಲ್ಲಾರ ಹತ್ರನೂ ರೊಕ್ಕ ಇರ್ತೈತ್ರಿ. ಆದ್ರ ಬಡುವ್ರಿಗೆ ಕೊಡ್ಬಕಂದ್ರ ಕೈ ಏಳಂಗಿಲ್ರಿ. ತಾವಾತು ತಮ್ಮನಿ ಆತು ಅಂತ ಇರ್ತಾರ. ಆದ್ರ ಆರ್.ಶಂಕರ್ ಸಾಹೇಬ್ರು ಹಂಗಲ್ರಿ. ಬಡವ್ರು ಅಂದ್ರ ಕರುಣ ಕಕ್ಲತಿಗಿ ಐತ್ರಿ. ಇಂತ ಸಾಹೇಬ್ರ ಇರ್ಬಕು ನೋಡ್ರಿ’ ಯಾವಾಗ ಆರ್.ಶಂಕರ್ ಬಡವರಿಗೆ ದಿನಸಿ ಕಿಟ್ ಕೊಡಲು ಮುಂದಾದರೋ; ಆಗ ಬಡ ಸಾರ್ವಜನಿಕರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ತರಹದ ನೂರೆಂಟು ಪ್ರಶಂಸೆಯ ಮಾತುಗಳು ಕೇಳಿ ಬಂದವು. ‘ಬೋಜನದಲ್ಲಿ ದಾನವಿರಬೇಕು, ಕರ್ತವ್ಯದಲ್ಲಿ ಸ್ವಾರ್ಥವಿರಬೇಕು’ ಎಂಬ ನಾಣ್ಣುಡಿ ಆರ್. ಶಂಕರ್ ಸಾಹೇಬರಿಗೆ ಹೇಳಿ ಮಾಡಿಸಿದ ಹಾಗೆ ಇದೆ ಎಂದು ಗಣೇಶ ನಗರದ ನಿವಾಸಿಯೋರ್ವರು ಸಂತೋಷ ವ್ಯಕ್ತಪಡಿಸಿದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!