Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಇದೇನು ರೈಲ್ವೇ ಸ್ಟೇಶನ್ನೋ… ಬೈಕ್ ಸ್ಟ್ಯಾಂಡೋ..?

ಪಾಂಡವ ನ್ಯೂಸ್, ರಾಣೇಬೆನ್ನೂರು: ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳು ಸುಂದರವಾಗಿ ಕಾಣಲೆಂದು ಏನೆಲ್ಲ ಅಲಂಕಾರ ಮಾಡಿರುತ್ತಾರೆ. ಮನೆಯ ಸುತ್ತಮುತ್ತ ವಿವಿಧ ತರಹದ ಹೂ ಗಿಡಗಳನ್ನು ಬೆಳೆಸಿ ಮನೆಯ ಸ್ವಾಸ್ಥ್ಯ ಕಾಪಾಡುತ್ತಾರೆ. ಅದೇ ತರಹ ಸಾರ್ವಜನಿಕ ಸ್ಥಳಗಳನ್ನೂ ಸಹ ತಮ್ಮ ಮನೆಗಳಂತೆಯೇ ಸುಂದರವಾಗಿಡಲು ಕೆಲವು ಹೃದಯವಂತರು ಬಯಸುತ್ತಾರೆ ಮತ್ತು ಹಾಗೆ ಮಾಡಿದ ಅನೇಕ ಉದಾಹರಣೆಗಳೂ ಸಹ ಇವೆ. ಅಂತಹ ಸ್ಥಳಗಳು ನಿಜಕ್ಕೂ ಸ್ವರ್ಗದ ಅನುಭವ ನೀಡುತ್ತವೆ. ಆದರೆ, ರಾಣೇಬೆನ್ನೂರು ನಗರದ ರೈಲ್ವೆ ಸ್ಟೇಶನ್ ನೋಡಿದವರ್ಯಾರಿಗೂ ಸ್ವರ್ಗದ ಅನುಭವ ಬಾರದೆ ನರಕದ ಅನುಭವವಾಗುತ್ತದೆ. ಏಕೆಂದರೆ ಇದು ರೈಲ್ವೆ ಸ್ಟೇಶನ್ ಆಗಿ ಉಳಿದಿಲ್ಲ. ರೈಲ್ವೇ ಇಲಾಖೆಯಲ್ಲಿಯೇ ಕಿತ್ತು ಗುಡ್ಡೆ ಹಾಕುವವರ (ಇಲಾಖೆ ಸಿಬ್ಬಂದಿಗಳು) ಬೈಕ್ ಸ್ಟ್ಯಾಂಡ್ ಆಗಿದೆ. ಈ ದೃಶ್ಯವನ್ನು ನೋಡಿದ ಯಾವುದೇ ಪ್ರಯಾಣಿಕನೂ ಅಸಹ್ಯಪಟ್ಟುಕೊಳ್ಳದೆ ಇರಲಾರನು.
ಹೌದು..! ಇದು ರಾಣೇಬೆನ್ನೂರು ರೈಲ್ವೆ ಸ್ಟೇಶನ್‍ನ ಒಳಾಂಗಣದ ದೃಶ್ಯದ ಕಥೆ. ಈ ಒಳಾಂಗಣದಲ್ಲಿ ದಿನಕ್ಕೆ ಕಡಿಮೆಯೆಂದರೂ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನಿಲುಗಡೆಯಾಗಿರುತ್ತವೆ. ಯಾವೊಬ್ಬ ಪ್ರಯಾಣಿಕನೂ ಇರದೆ ಇದ್ದರೂ ಸಹ ಇಲ್ಲಿ ಬೈಕ್ ಸ್ಟ್ಯಾಂಡ್ ನಿರ್ಮಾಣವಾಗಿರುತ್ತದೆ. ಯಾರಾದರೂ ಗೊತ್ತಿರದ ಅಮಾಯಕನೊಬ್ಬನು ತಿಳಿಯದೆ ಇಲ್ಲಿ ನೆರಳಿದೆಯೆಂದು ಬೈಕ್ ತಂದು ನಿಲ್ಲಿಸಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಅದು ನೋಡಲಿಕ್ಕೆ ಶುದ್ದಾಂಗ ಬೈಕ್ ಸ್ಟ್ಯಾಂಡ್ ಆಗಿದೆ. ಒಳಾಂಗಣದ ಗೋಡೆಯುದ್ದಕ್ಕೂ ಅಂಟಿಕೊಂಡು ಮತ್ತು ಎಲ್ಲೆಂದರಲ್ಲಿ ಬೈಕ್‍ಗಳನ್ನು ಅಲ್ಲಿನ ಸಿಬ್ಬಂದಿಗಳು ನಿಲುಗಡೆ ಮಾಡಿದ್ದಾರೆ. ಈ ದೃಶ್ಯ ನೋಡಿದವರೆಲ್ಲರಿಗೂ ಅನ್ನಿಸುತ್ತದೆ ಇದು ರೈಲ್ವೆ ಸ್ಟೇಶನ್ ಅಲ್ಲ; ಇದೊಂದು ಬೈಕ್ ಸ್ಟ್ಯಾಂಡ್ ಎಂದು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಒಳಾಂಗಣದಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬೇಕೆಂಬ ಖಾಯಿದೆ ಇದೆಯೇ? ಅಂತಹ ಯಾವುದೇ ಖಾಯಿದೆ ಪತ್ರ ಅವರ ಬಳಿ ಇದ್ದರೆ ಬಹಿರಂಗಪಡಿಸಲಿ. ಸಾರ್ವಜನಿಕರಿಗೊಂದು ನ್ಯಾಯ? ಇಲ್ಲಿನ ನೌಕರರಿಗೊಂದು ನ್ಯಾಯವೇ? ಸಾರ್ವಜನಿಕರಿಗೆ ರೈಲ್ವೆ ನಿಲ್ದಾಣದ ಹೊರಗೆ ಪಾರ್ಕಿಂಗ್ ವ್ಯವಸ್ಥೆಯೇನೋ ಇದೆ. ಆದರೆ, ನೆರಳಿಗಿಂತ ಬಿಸಿಲಿಗೇ ಹೆಚ್ಚು ಬೈಕ್‍ಗಳನ್ನು ನಿಲ್ಲಿಸುವ ಅನಿವಾರ್ಯತೆ ಇದೆ. ಅರ್ಥಾತ್ ಸಾರ್ವಜನಿಕರಿಗೆ ಪಾರ್ಕಿಂಗ್ ಮಾಡಲು ನೆರಳಿಲ್ಲ. ಹೀಗಿರುವಾಗ ಇಲ್ಲಿನ ನೌಕರರಿಗೊಂದು, ಸಾರ್ವಜನಿಕರಿಗೊಂದು ನ್ಯಾಯವೇಕೆ? ಸಾರ್ವಜನಿಕರೂ ತಮ್ಮ ವಾಹನಗಳನ್ನು ಒಳಾಂಗಣದಲ್ಲಿಯೇ ನಿಲುಗಡೆ ಮಾಡಬಹುದಲ್ಲವೇ? ಸಾರ್ವಜನಿಕರಿಗೆ ಅನುಮತಿ ಇದೆಯೇ? ಇಲ್ಲ ಎನ್ನುವುದಾದರೆ, ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನುಮತಿ ಇದೆಯೇ? ಮೇಲಾಧಿಕಾರಿಗಳೇ ಉತ್ತರಿಸಬೇಕು.
ರೈಲ್ವೇ ಸ್ಟೇಶನ್‍ನ ಒಳಾಂಗಣದ ಪ್ಲ್ಯಾಟ್‍ಪಾರ್ಮ ಇರುವುದು ಪ್ರಯಾಣಿಕರು ಕೂರಲಿಕ್ಕೆ, ನಿಲ್ಲಲಿಕ್ಕೆ ಮತ್ತು ಸಂಚರಿಸಲಿಕ್ಕೆ. ಆದರೆ, ಇಲ್ಲಿನ ಸಿಬ್ಬಂದಿಗಳು ತಮ್ಮ ದ್ವಿಚಕ್ರ ವಾಹನಗಳನ್ನು ಒಳಗಡೆ ನಿಲ್ಲಿಸಿದ್ದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿರುವುದಂತೂ ಸತ್ಯ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನೈತಿಕತೆ ಹಾಗೂ ಮಾನವೀಯತೆ ಇದ್ದರೆ ಕೂಡಲೇ ಒಳಗೆ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಬೇಕಾಗಿದೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!